ದೇಸಿ ಸ್ಕಿಲ್ಸ್ ವತಿಯಿಂದ ಕೋಲಾರ ಜಿಲ್ಲೆಯಲ್ಲಿ “ಗ್ರಾಮೋದ್ಧಾರ ಕೇಂದ್ರಗಳ’ ಅದ್ಧೂರಿ ಚಾಲನೆ

ರಾಜ್ಯವ್ಯಾಪ್ತಿ ಗ್ರಾಮ ಪಂಚಾಯಿತಿಗಳ ಸುಪರ್ದಿಯಲ್ಲಿ ಬರುವ ಎಲ್ಲಾ ಗ್ರಾಮೀಣ ಪ್ರದೇಶದ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ನಗರ ಪ್ರದೇಶಗಳಿಗೆ ಎಡತಾಕುವುದನ್ನು ತಪ್ಪಿಸುವ ದೃಷ್ಟಿಯಿಂದ ಚಿನ್ನದ ನಾಡು ಕೋಲಾರ ಜಿಲ್ಲೆಯ ಬೆಳಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕೃತವಾಗಿ ಗ್ರಾಮೋದ್ಧಾರ ಕೇಂದ್ರಕ್ಕೆ ಚಾಲನೆಯನ್ನು ನೀಡಲಾಯಿತು.

ಸದರಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪರಿಕಲ್ಪನೆಗಾರ್ತಿ ಹಾಗೂ ಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಮತಿ ಕಾವ್ಯವೇಣುರವರು, ಇಂದಿನ ದಿನಗಳಲ್ಲಿ ಎಲ್ಲರೂ ಆರ್ಥಿಕ ದೃಷ್ಟಿಯಿಂದಲೇ ಹಲವಾರು ಸಂಸ್ಥೆಗಳನ್ನು ಪ್ರಾರಂಭಿಸಿದ್ದು, ನಾವು ಹಲವಾರು ವರ್ಷಗಳಿಂದ ಇದನ್ನೆಲ್ಲ ಬದಿಗೊತ್ತಿ, ಮಹಾತ್ಮ ಗಾಂಧೀಜಿಯವರ ಕನಸಿನಂತೆ ‘ಭಾರತ ಹಳ್ಳಿಗಳ ದೇಶ-ಹಳ್ಳಿಗಳ ಉದ್ಧಾರವಾಗದೇ ದೇಶದ ಉದ್ಧಾರವಾಗದು’ ಯಾವುದಾದರೂ ಒಂದು ರೀತಿಯಲ್ಲಿಯಾದರೂ ಈ ದೇಶದ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ದೇಶದ ಬೆನ್ನೆಲುಬಾದ ಅನ್ನದಾತನೆನಿಸಿರುವ ರೈತರು ಅನುಭವಿಸುತ್ತಿರುವ ಕಷ್ಟವನ್ನು ನಮ್ಮ ಕೈಲಾದ ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ದೇಸಿ ಸ್ಕಿಲ್ಸ್ ನ ‘ಗ್ರಾಮೋದ್ದಾರ ಕೇಂದ್ರ’ದ ವಿನ್ಯಾಸವನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದು ನಿಮಗಾಗಿಯೇ ತಂದಿರುವಂತಹ ಒಂದು ಯೋಜನೆ. ಇದರ ಸದುಪಯೋಗ ಪಡಿಸುಕೊಳ್ಳುವುದಲ್ಲದೇ, ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ದೇಶವನ್ನು ಉತ್ತುಂಗದ ಸ್ಥಿತಿಗೆ ಕೊಂಡೊಯ್ಯುವಂತೆ ಮನವಿ ಮಾಡಿದರು.

ನಂತರ ಮಾತನಾಡಿದ ಸಂಸ್ಥೆಯ ಬೆಂಗಳೂರು ವಲಯ ಸಮನ್ವಯಾಧಿಕಾರಿಯಾದ ಶ್ರೀಯುತ ಕುಮಾರ ಎನ್  ರವರು, ರಾಜ್ಯಸರ್ಕಾರದ ವತಿಯಿಂದ ನೀಡಲಾಗುತ್ತಿರುವ ೧೪ ಇಲಾಖೆಗಳ ಸುಮಾರು ೭೦ಕ್ಕಿಂತಲೂ ಹೆಚ್ಚಿನ ಸೇವೆಗಳು ಈ ಕೇಂದ್ರಗಳಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಿಕೊಳ್ಳುವುದರ ಮೂಲಕ ಸಮಯ ಹಾಗೂ ಹಣದ ಉಳಿತಾಯದ ಬಗ್ಗೆ ಮತ್ತು ದೇಸಿ ಸ್ಕಿಲ್ಸ್ನ ಗ್ರಾಮೋದ್ಧಾರ ಕೇಂದ್ರಗಳು ಹೇಗೆ ವಿಭಿನ್ನವಾಗಿದೆ ಎಂಬುದರ ಬಗ್ಗೆ ಸವಿಸ್ತಾರ ವಿವರಣೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಉಷಾ ವೆಂಕಟೇಶ್‌ರವರು ಮಾತನಾಡುತ್ತಾ ಈ ಪರಿಕಲ್ಪನೆಯ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿ, ಎಲ್ಲಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರೆ ಗ್ರಾಮೀಣ ಜನತೆಗೆ ಅನುಕೂಲವಾಗಲಿದೆ ಹಾಗೂ ದೇಸಿಸ್ಕಿಲ್ಸ್ ಸಂಸ್ಥೆಯನ್ನು ಕೈ ಬಲಪಡಿಸ ಬೇಕಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಕೋಲಾರ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀಯುತ ಅಶ್ವತ್‌ಗೌಡರವರು ಸ್ವಾಗತ ಭಾಷಣ ಮಾಡಿದರು ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಮನ್ವಯಾಧಿಕಾರಿ ಶ್ರೀಯುತ ಭರತ್‌ಕುಮಾರ್, ಬೆಳಮಾರನ ಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.Leave a Reply